ಕರ್ಷಕ (ಯಾಂತ್ರಿಕ) : ಇತರ ವಾಹನಗಳನ್ನು ಮತ್ತು ಸಾಮಾನುಗಳನ್ನು ಎಳೆಯುವುದಕ್ಕೂ ಎಳೆದುಕೊಂಡು ಹೋಗುವ ಇತರ ಸಲಕರಣೆಗಳನ್ನು ನಡೆಸುವುದಕ್ಕೂ ಉಪಯೋಗಿಸುವ ಸ್ವಯಂಚಾಲಿತವಾದ ವಾಹನ; ಅಥವಾ ಇಂಥ ಕೆಲಸಗಳನ್ನು ಮಾಡುವ ದಾರಿಯ ಮೇಲೆ ಓಡುವ ಯಂತ್ರಚಾಲಿತವಾದ ಗಾಡಿ (ಟ್ರ್ಯಾಕ್ಟರ್). ಹೊಲಮನೆಯ ಕರ್ಷಕ ಅನೇಕ ಕೆಲಸಗಳನ್ನು ಮಾಡಬಲ್ಲ ಶಕ್ತಿಚಾಲಿತ ಯಂತ್ರ. ಅದರಲ್ಲಿ ಬೇಸಾಯದ ಹತ್ಯಾರುಗಳನ್ನು ಎಳೆಯಲು ಸಲಾಕಿಯೂ ಸಲಕರಣೆಗಳನ್ನು ಎಳೆಯುವುದಕ್ಕೆ ಮತ್ತು ಕೊನೆಯಿಲ್ಲದ ಪಟ್ಟಿಯ ಕಪ್ಪಿಯನ್ನು ಚಲಿಸುವುದಕ್ಕೆ ಯಂತ್ರಚಾಲಿತ ವ್ಯವಸ್ಥೆಯೂ  ಇರುತ್ತವೆ. ಎಷ್ಟು ಎಕರೆಗಳ ಭೂಮಿಯಲ್ಲಿ ಕೆಲಸ ಮಾಡಬೇಕು, ನೆಲದ ಸ್ವಭಾವವೇನು, ಯಾವ ನಮೂನೆಯ ಬೆಳೆಗಳನ್ನು ತೆಗೆಯುತ್ತಾರೆ ಇವನ್ನು ನೋಡಿಕೊಂಡು ಕರ್ಷಕದ ಸಂವಿಧಾನವನ್ನು ನಿಶ್ಚಯಿಸಬೇಕು. ಆದ್ದರಿಂದ ಒಂದೊಂದು ಮಾದರಿಯೂ ಅದರ ತೂಕ, ನೆಲದಿಂದ ಎತ್ತರ, ತಿರುಗಲು ಬೇಕಾದ ತ್ರಿಜ್ಯ, ಉತ್ಪತ್ತಿ ಮಾಡಬೇಕಾದ ಸಾಮಥರ್ಯ್‌-ಈ ತಪಶೀಲುಗಳಲ್ಲಿ ವ್ಯತ್ಯಾಸವಾಗುತ್ತದೆ. ಯಂತ್ರ ಬರುವ ಮುಂಚೆ ಅದನ್ನು ನಡೆಸಲು ನೆಲದಲ್ಲಿ ಅನುಕೂಲತೆಗಳಿವೆಯೇ ಎಂದು ನೋಡಬೇಕು.

ಕರ್ಷಕಗಳನ್ನು ನಾಲ್ಕು ನಮೂನೆಗಳಾಗಿ ವಿಂಗಡಿಸಬಹುದು: ೧ ನಾಲ್ಕು ಗಾಲಿಗಳಿರುವಂಥವು; ೨ ಎತ್ತರವಾದ ಚಕ್ರಗಳಿರುವಂಥವು; ೩ ಮೂರು ಗಾಲಿಗಳಿರತಕ್ಕವು; ೪ ಸಾವಕಾಶವಾಗಿ ತಿರುಗುವ ಯಂತ್ರಗಳು. 

ಕರ್ಷಕಗಳನ್ನು ಅವು ಪಟ್ಟಿಯ (ಬೆಲ್ಟ್‌) ಹತ್ತಿರ ಎಷ್ಟು ಅಶ್ವಸಾಮಥರ್ಯ್‌ವನ್ನು ಒದಗಿಸಬಲ್ಲವು ಎಂಬುದನ್ನು ಆಧರಿಸಿ ವಿಭಾಗಿಸುತ್ತಾರೆ. ಚಿಕ್ಕ ಮಾದರಿಗಳು ೧೦ ಅಶ್ವಸಾಮಥರ್ಯ್‌ವನ್ನೂ ದೊಡ್ಡ ಮಾದರಿಗಳು ೯೦ ಅಶ್ವಸಾಮರ್ಥ್ಯಗಳನ್ನೂ ಒದಗಿಸಬಲ್ಲವು. 

ಕರ್ಷಕದ ಮುಖ್ಯವಾದ ಭಾಗಗಳಿವು: ೧ ಎಂಜಿನ್; ೨ ಕ್ಲಚ್ ಮತ್ತು ಸಾಗಣೆ (ಟ್ರಾನ್ಸ್‌ಮಿಶನ್). ಈ ಭಾಗಗಳನ್ನು ಒಂದಕ್ಕೊಂದು ಹೊಂದಿಕೊಂಡು ಕೆಲಸ ಮಾಡುವ ಹಾಗೆ ಸಂವಿಧಾನ ಮಾಡುತ್ತಾರೆ. ಪ್ರಯಾಣಿಕರನ್ನು ಸಾಗಿಸುವ ರೈಲ್ವೆ ಎಂಜಿನ್ನುಗಳ ಹೆಚ್ಚಿನ ವೇಗದಲ್ಲಿ ಓಡುತ್ತವೆ; ಆದರೆ ಕರ್ಷಕದ ಎಂಜಿನ್ನುಗಳು ನಿಧಾನವಾಗಿ ಚಲಿಸುತ್ತವೆ. ಈ ಎಂಜಿನ್ನುಗಳ ಕ್ರ್ಯಾಂಕಿನ ಅಚ್ಚು ಮಿನಿಟಿಗೆ ೨,೦೦೦ ಸುತ್ತು ತಿರುಗಿದಾಗ ಅವುಗಳಿಂದ ಗರಿಷ್ಠ ಶಕ್ತಿ ಉತ್ಪತ್ತಿಯಾಗುತ್ತದೆ. ಎಂಜಿನ್ನುಗಳಲ್ಲಿ ೧ ರಿಂದ ೬ರವರೆಗೆ ಉರುಳೆಗಳು ಇರಬಹುದು. ಅವು ಪೆಟ್ರೋಲ್, ಸೀಮೆಎಣ್ಣೆ ಅನಿಲ, ಇಲ್ಲವೆ ಡೀಸಲ್ ಇಂಧನವನ್ನು ಉರಿಸಬಹುದು. ಅವು ವಿದ್ಯುತ್ತಿನ ಕಿಡಿ ಅಥವಾ ಡೀಸಲ್ ನಮೂನೆಯವಾಗಿದ್ದು ನಾಲ್ಕು ಆಂದೋಲನಗಳಲ್ಲಿ ಕೆಲಸ ಮಾಡಬಹುದು. ಎಂಜಿನ್ನುಗಳನ್ನು ನೀರಿನಿಂದ ಇಲ್ಲವೆ ಗಾಳಿಯಿಂದ ತಣ್ಣಗೆ ಮಾಡಬಹುದು. ನಿಧಾನವಾಗಿ ಹೋಗುವ ಕರ್ಷಕಗಳನ್ನು ಬಿಟ್ಟು ಉಳಿದವನ್ನು ಮೋಟಾರುಗಳ ಹಾಗೆ ಒಂದು ತಿರುಚಕ್ರವನ್ನು (ಸ್ಟೀಯರಿಂಗ್ ವ್ಹೀಲ್) ತಿರುಗಿಸಿ ಅದು ಹೋಗುವ ದಿಕ್ಕನ್ನು ಬದಲಾಯಿಸುತ್ತಾರೆ. ಬಿರಿಗಳನ್ನು ಸಾಮಾನ್ಯವಾಗಿ ಹಿಂದಿನ ಚಕ್ರಗಳಿಗೆ ತಗಲಿಸಿರುತ್ತಾರೆ. ಚಿಕ್ಕದಾದ ಕ್ರಾಲರ್ ನಮೂನೆಯ ಕರ್ಷಕಗಳನ್ನು ಬೇಸಾಯದ ಕೆಲಸಕ್ಕೂ ಉಪಯೋಗಿಸುತ್ತಾರೆ. ಇವಕ್ಕೆ ರಬ್ಬರ್ ಟಯರುಗಳಿರುವುದಿಲ್ಲ. ಉಕ್ಕಿನ ತಗಡುಗಳಿಂದ ಅಗಲವಾಗಿ ಬಳುಕುವಂತೆ ಮಾಡಿದ ಕೊನೆಯಿಲ್ಲದ ಪಟ್ಟಿಯೇ ನೆಲದ ಮೇಲೆ ಸುತ್ತುತ್ತ ಕ್ರಾಲರನ್ನು ಮುಂದೆ ಒಯ್ಯುವುದು. ಒಂದೊಂದು ಪಟ್ಟಿಯೂ ಒಂದು ಮುಂದಿನ ಚಕ್ರವನ್ನೂ ಒಂದು ಹಿಂದಿನದನ್ನೂ ಒಳಗೊಂಡಿರುತ್ತದೆ. ಒಂದೊಂದೂ ಟ್ರ್ಯಾಕ್ಟರಿನ ತೂಕವನ್ನು ಹೊರಬಲ್ಲ ರೋಲರಿನ ಪಟ್ಟಿಯ ಚೌಕಟ್ಟಿನ ಮೇಲೆ ನಿಂತಿರುತ್ತದೆ. ಹಿಂದಿನ ಚಕ್ರಗಳ ಅಂಚಿಗೆ ಹೊಂದಿಕೊಂಡಿರುವ ಹಲ್ಲುಗಳಿಂದ ಆ ಪಟ್ಟೆ ತಿರುಗುತ್ತದೆ. ಒಂದು ರೋಲರಿನ ಪಟ್ಟಿ ನಿಶ್ಚಲವಾಗಿದ್ದು ಇನ್ನೊಂದಕ್ಕೆ ಶಕ್ತಿಯನ್ನೊದಗಿಸುವ ಹಿಡಿಕೆಗಳನ್ನು ನಿಯಂತ್ರಣ ಮಾಡುವ ಸನ್ನೆಕೋಲುಗಳನ್ನು ನಡೆಸುವುದರಿಂದ ಪಟ್ಟಿಯನ್ನು ತಿರುಗಿಸುವುದು ಸಾಧ್ಯವಾಗುತ್ತದೆ. 

ಕೈಗಾರಿಕೆಗಳಲ್ಲಿ ಉಪಯೋಗಿಸುವ ಟ್ರ್ಯಾಕ್ಟರುಗಳ ಸಂವಿಧಾನವೂ ಬೇಸಾಯದ ಟ್ರ್ಯಾಕ್ಟರಿನ ಸಂವಿಧಾನದ ಹಾಗೆಯೇ ಇರುತ್ತದೆ.	(ಎಚ್.ಸಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ